ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೧

ಪೀಠಿಕೆ

ವಿಜ್ಞಾನ ಶಿಕ್ಷಣ ಎಂಬ ಹೆಸರಿನಲ್ಲಿ ಮನುಕುಲ ಈ ತನಕ ಆವಿಷ್ಕರಿಸಿದ ವೈಜ್ಞಾನಿಕ ತಥ್ಯ, ನಿಯಮ, ಸೂತ್ರ, ಸಾರ್ವತ್ರೀಕರಣ (ಜನರಲೈಸೇಷನ್) ಇವೇ ಮುಂತಾದವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಂಠಪಾಠ ಮಾಡಿಸುತ್ತಿರುವುದು ಸರಿಯೇ? ಸರಿ ಎಂದಾದರೆ ವಿಜ್ಞಾನ ಕಲಿಕೆ ಕಷ್ಟ ಎಂಬ ಭಾವನೆ ಮಕ್ಕಳ ಮನಸ್ಸಿನಲ್ಲಿ ಬೇರೂರಿರುವುದೇಕೆ? ವೈಜ್ಞಾನಿಕ ಮನೋಧರ್ಮ ಮಕ್ಕಳಲ್ಲಿ ವಿಕಸಿಸದೇ ಇರುವುದೇಕೆ? ಜೀವನದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ವಿಜ್ಞಾನದ ವಿಧಾನಗಳನ್ನು ಅಳವಡಿಸಿಕೊಳ್ಳದೇ ಇರುವುದೇಕೆ? ಇಂಥ ಎಲ್ಲ ಪ್ರಶ್ನೆಗಳಿಗೂ ಉತ್ತರ ತಿಳಿದಿದ್ದರೂ ಪರಿಸ್ಥಿತಿಯನ್ನು ಸುಧಾರಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಕರ ಇಚ್ಛಾಶಕ್ತಿ ಮತ್ತು ವೃತ್ತಿ ಬದ್ಧತೆಯ ಕೊರತೆಯಿಂದಾಗಿ ಹಾಗೂ ಇಂಥ ವಿಜ್ಞಾನ ಶಿಕ್ಷಣದ ದೂರದ ಪರಿಣಾಮಗಳನ್ನು ಮುಂಗಾಣದ ತಂದೆ ತಾಯಿಯರು (ವಿಶೇಷವಾಗಿ ವಿದ್ಯಾವಂತ) ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕೆ ನೀಡುತ್ತಿರುವ ಪ್ರಧಾನ್ಯ ಇದಕ್ಕೆ ಕಾರಣ. ಪ್ರಾಥಮಿಕ ಶಾಲಾ ಹಂತದಲ್ಲಿ ‘ಎಷ್ಟು’ ವಿಜ್ಞಾನ ಕಲಿತರು ಅನ್ನುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯವನ್ನು ‘ಹೇಗೆ’ ಕಲಿತರು ಅನ್ನುವುದಕ್ಕೆ ನೀಡಬೇಕು. ದುರದೃಷ್ಟವಶಾತ್, ನಮ್ಮ ಶಿಕ್ಷಣ ನೀತಿ ರೂಪಿಸುವ ಸ್ವಘೋಷಿತ ಅಥವ ಆಡಳಿತಾರೂಢ ವರ್ಗದಿಂದ ಮಾನ್ಯತೆ ಪಡೆದ ‘ತಜ್ಞ’ರು ಈ ಅಂಶಕ್ಕೆ ಆಗಿಂದಾಗ್ಯೆ ‘ಬಾಯುಪಚಾರ’ (ಲಿಪ್ ಸರ್ವೀಸ್) ಸಲ್ಲಿಸುತ್ತಿದ್ದಾರಾದರೂ ಶಾಲಾ ಮಟ್ಟದಲ್ಲಿ ಪರಿಸ್ಥಿತಿಯಲ್ಲಿ ಗಮನಾರ್ಹ ಸುಧಾರಣೆ ಆಗಿಲ್ಲ. ಅಂದ ಮಾತ್ರಕ್ಕೆ, ಪ್ರಜ್ಞಾವಂತ ಪೋಷಕರು ನಿರಾಶರಾಗಬೇಕಿಲ್ಲ. ಮನೆಯಲ್ಲಿಯೇ ಕೆಲವು ಚಟುವಟಿಕೆಗಳನ್ನು ಮಾಡಿ ಶಾಲೆಯಲ್ಲಿ ಆಗದ ಕಲಿಕೆ ಸ್ವಲ್ಪ ಮಟ್ಟಿಗಾದರೂ ಮನೆಯಲ್ಲಿ ಆಗುವಂತೆ ಮಾಡಲು ಸಾಧ್ಯ. ಪೋಷಕರು ಇದಕ್ಕಾಗಿ ಹೆಚ್ಚು ಹಣ ವೆಚ್ಚ ಮಾಡಬೇಕಿಲ್ಲವಾದರೂ ತುಸು ಸಮಯವನ್ನು ಇದಕ್ಕಾಗಿ ವಿನಿಯೋಗಿಸಬೇಕು. ಈ ಮಾಲಿಕೆಯಲ್ಲಿ ಸೂಚಿಸಿರುವ ಚಟುವಟಿಕೆಗಳನ್ನು ಮಾಡಿ ತೋರಿಸಿ, ಮಕ್ಕಳು ಮಾಡುವಂತೆ ಪ್ರೊತ್ಸಾಹಿಸಿ,

ಈ ಮಾಲಿಕೆಯಲ್ಲಿ ಸೂಚಿಸಿರುವ ಚಟುವಟಿಕೆಗಳ ಸೃಷ್ಟಿಕರ್ತರು ಅಜ್ಞಾತ ಪ್ರತ್ಯುತ್ಪನ್ನಮತಿ ಶಿಕ್ಷಕರೇ ವಿನಾ  ನಾನಲ್ಲ. ಈ ಎಲ್ಲ ಚಟುವಟಿಕೆಗಳನ್ನು ನಾನು ಸ್ವತಃ ಮಾಡಿ ನೋಡಿದ್ದೇನೆ, ವಿದ್ಯಾರ್ಥಿಗಳಿಂದ ಮಾಡಿಸಿದ್ದೇನೆ. ಎಂದೇ, ಇವುಗಳ ಕಾರ್ಯ ಸಾಧ್ಯತೆಯ ಬಗ್ಗೆ ಚಿಂತೆ ಮಾಡಬೇಕಿಲ್ಲ. ಯಾವುದೇ ಚಟುವಟಿಕೆ ಮಾಡಲು ಅಗತ್ಯವಾದ ಯಾವುದೋ ಒಂದು ಸಾಮಗ್ರಿ ದೊರೆಯದೇ ಇದ್ದರೆ ನಿರಾಶರಾಗದೆ ಪರ್ಯಾಯಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಚಟುವಟಿಕೆಗಳಲ್ಲಿ ವೀಕ್ಷಿಸುವ ವಿದ್ಯಮಾನಗಳಿಗೆ ಸೈದ್ಧಾಂತಿಕ ವಿವರಣೆಯನ್ನು ಉದ್ದೇಶಪೂರ್ವಕವಾಗಿಯೇ ಕೊಟ್ಟಿಲ್ಲ. ಈ ಚಡುವಟಿಕೆಗಳನ್ನು ಮಾಡುವಾಗ ಮನಸ್ಸಿನಲ್ಲಿ ಉದ್ಭವಿಸುವ ಪ್ರಶ್ನೆಗಳಿಗೆ ಸ್ವತಃ ಉತ್ತರ ಪತ್ತೆಹಚ್ಚಲು ಪ್ರಯತ್ನಿಸಬೇಕು. ಎಲ್ಲ ಪ್ರಶ್ನೆಗಳಿಗೆ ಉತ್ತರ ಯಾವುದೋ ವಿಜ್ಞಾನ ಪುಸ್ತಕಗಳಲ್ಲಿ ಇದ್ದೇ ಇರುತ್ತದೆ, ನಾವು ಸ್ವಪ್ರಯತ್ನದಿಂದ ಆವಿಷ್ಕರಿಸಬೇಕಾದದ್ದು ಏನೂ ಇಲ್ಲ ಎಂಬ ಮತ್ತು ವಿಜ್ಞಾನದ ಮೂಲಭೂತ ಪರಿಕಲ್ಪನೆಗಳನ್ನು ಕಲಿಯಲು ದುಬಾರಿ ಉಪಕರಣಗಳಿರುವ ಪ್ರಯೋಗಾಲಯದ ಅಗತ್ಯವಿದೆ ಎಂಬ ಭ್ರಮೆಗಳನ್ನು ಹೋಗಲಾಡಿಸಿ ಸ್ವಯಂಕಲಿಕೆಗೆ ಪ್ರೋತ್ಸಾಹಿಸುವುದು ನನ್ನ ಉದ್ದೇಶವೇ ವಿನಾ ಯಾವುದೋ ಪರೀಕ್ಷೆಗೆ ತಯಾರು ಮಾಡುವುದಲ್ಲ. ಏನೂ ಖರ್ಚಿಲ್ಲದೇ ಅಥವ ಅತೀ ಕಮ್ಮಿ ಖರ್ಚಿನಲ್ಲಿ ಮಾಡಬಹುದಾದ ಚಟುವಟಿಕೆಗಳನ್ನು ಮಾತ್ರ ಈ ಮಾಲಿಕೆಯಲ್ಲಿ ಒದಗಿಸುತ್ತಿದ್ದೇನೆ. ಮಾಡಿ, ಹುದುಗಿರುವ ವೈಜ್ಞಾನಿಕ ತತ್ವದ ಕುರಿತು ಆಲೋಚಿಸಿ, ಕಲಿಯಿರಿ, ಕಲಿಸಿ. ಚಟುವಟಿಕೆಗಳನ್ನು ಮಾಡಿ ತೋರಿಸಿದ ಬಳಿಕ ಅಥವ ಮಕ್ಕಳಿಂದ ಮಾಡಿಸಿದ ಬಳಿಕ ಸಮಯೋಚಿತ ಯುಕ್ತ ಪ್ರಶ್ನೆಗಳನ್ನು ಕೇಳುವುದರ ಮೂಲಕ ಮಕ್ಕಳೇ ಚಟುವಟಿಕೆಗಳಲ್ಲಿ ಹುದುಗಿರುವ ವೈಜ್ಞಾನಿಕ ಅಂಶಗಳನ್ನು ಆವಿಷ್ಕರಿಸುವಂತೆ ಮಾಡಬೇಕೇ ವಿನಾ ನೇರವಾಗಿ ವಿವರಿಸ ಕೂಡದು. ಇದಕ್ಕಾಗಿ ಪ್ರತೀ ಚಟುವಟಿಕೆಯ ಅಂತ್ಯದಲ್ಲಿ ಮಾರ್ಗದರ್ಶಿ ಪ್ರಶ್ನೆಗಳನ್ನು ಸೂಚಿಸಿದೆ.

ಚಟುವಟಿಕೆ ೧ – ಆರಂಭಿಕ ಸವಾಲು

ಕಣ್ಣಿಗೆ ಕಾಣದೇ ಇದ್ದರೂ ನಮ್ಮ ಸುತ್ತಲೂ ವಾಯು ಇದೆ. ಖಾಲಿ ಇರುವಂತೆ ಕಾಣುವಲ್ಲಿಯೂ ವಾಯು ಇದೆ. ವಾಯು ಒಂದು ದ್ರವ್ಯ (Matter). ಆದ್ದರಿಂದ ವಾಯು ಇರುವ ಸ್ಥಳದಿಂದ ಅದನ್ನು ಹೊರಹಾಕದ ಹೊರತು ಅದೇ ಸ್ಥಳದಲ್ಲಿ ಇನ್ನೊಂದು ವಸ್ತುವನ್ನು ಇಡಲು ಸಾಧ್ಯವಿಲ್ಲ. ವಾಯು ನೀರಿಗಿಂತ ಹಗುರ. ಇವೇ ಮೊದಲಾದ ವೈಜ್ಞಾನಿಕ ತಥ್ಯಗಳನ್ನು ಕಲಿಸಲು ಸಹಕಾರಿ, ಮೇಲ್ನೋಟಕ್ಕೆ ಬಲು ಸರಳವಾದ ಈ ಸವಾಲು.(ಪರಿಕರಗಳನ್ನು ಸಿದ್ಧಪಡಿಸಿದ ಬಳಿಕ ಮಾಡಬೇಕಾದ್ದು ಏನು ಎಂಬುದನ್ನು ದೊಡ್ಡ ಮಕ್ಕಳಿಗೆ ಹೇಳಿದರೂ ಮೊದಲು ಬಹುಮಂದಿ ಚಿಂತಾಕ್ರಾಂತರಾಗುವುದನ್ನು ನಾನು ನೋಡಿದ್ದೇನೆ)

ಒಂದು ‘ಖಾಲಿ’ ಗಾಜಿನ ಲೋಟ (ಇದು ಪಾರದರ್ಶಕವಾಗಿರುವುದರಿಂದ ಒಳಗೆ ಏನು, ಜರಗುತ್ತಿದೆ ಎಂಬುದನ್ನ ವೀಕ್ಷಿಸಬಹುದು) ಚಿಕ್ಕ ಕರವಸ್ತ್ರ ಅಥವ ಹತ್ತಿ ಅಥವ ಕಾಗದದ ಉಂಡೆ, ಒಂದು ಬಾಲ್ದಿ ನೀರು – ಇವಿಷ್ಟು ಈ ಚಟುವಟಿಕೆಗೆ ಬೇಕಾದ ಪರಿಕರಗಳು. ಗಾಜಿನ ಲೋಟದ ತಳದಲ್ಲಿ ಕರವಸ್ತ್ರವನ್ನು ಮುದ್ದೆ ಮಾಡಿ ಇಡಿ. ಳೊಟವನ್ನು ತಲೆಕೆಳಗೆ ಮಾಡಿ ಹಿಡಿದರೂ ಕರವಸ್ತ್ರ ಬೀಳಕೂಡದು.

ಮಾಡಬೇಕಾದದ್ದು ಇಷ್ಟೆ: ಲೋಟದ ಬಾಯಿಯನ್ನು ಯಾವುದರಿಂದಲೂ ಮುಚ್ಚದೇ ಕರವಸ್ತ್ರ ಸ್ವಲ್ಪವೂ ಒದ್ದೆಯಾಗದಂತೆ ಲೋಟವನ್ನು ಬಾಲ್ದಿಯಲ್ಲಿ ಇರುವ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಸಿ ತೆಗೆಯಬೇಕು.

ಈ ಸವಾಲನ್ನು ಯಶಸ್ವಿಯಾಗಿ ಪರಿಹರಿಸಿದ ಬಳಿಕ ಉತ್ತರಿಸಬೇಕಾದ (ಮಾರ್ಗದರ್ಶಿ)ಪ್ರಶ್ನೆಗಳು

೧. ಸವಾಲನ್ನು ಯಶಸ್ವಿಯಾಗಿ ಪರಿಹರಿಸಬೇಕಾದರೆ ಲೋಟವನ್ನು ಹೇಗೆ ಹಿಡಿದು ನೀರಿನಲ್ಲಿ ಮುಳುಗಿಸಬೇಕು?

೨. ಈ ರೀತಿಯಲ್ಲಿ ಲೋಟವನ್ನು ನೀರಿನಲ್ಲಿ ಮುಳುಗಿಸಿದಾಗ ನೀರು ಇಡೀ ಲೋಟದೊಳಕ್ಕೆ ನುಗ್ಗದಂತೆ ತಡೆದದ್ದು ಯಾವುದು? ಸ್ವಲ್ಪ ನೀರು ನುಗ್ಗಿದ್ದು ಹೇಗೆ?

೩. ಬೇರೆ ರೀತಿಯಲ್ಲಿ ಲೋಟವನ್ನು ಹಿಡಿದು ಮುಳುಗಿಸಿದರೆ ಏನಾಗುತ್ತದೆ? ಏಕೆ?

೪. ‘ಖಾಲಿ’ ಲೋಟ ನಿಜವಾಗಿಯೂ ಖಾಲಿ ಇತ್ತೇ? ‘ಖಾಲಿ’ ಲೋಟದೊಳಗಿದ್ದ ಅಗೋಚರ ದ್ರವ್ಯ ಅಥವ ಪದಾರ್ಥ (Matter) ಯಾವುದು?

ಚಟುವಟಿಕೆ ೨ – ಮೋಜಿನ ಸವಾಲು

೧೪ x ೧೦ ಸೆಂಮೀ ಅಳತೆಯ ಆಯಾಕಾರದ ಕಾಗದದಲ್ಲಿ ಒಂದು ರಂಧ್ರ ಮಾಡಿ ಆ ರಂಧ್ರದ ಮೂಲಕ ನೀವು ತೂರಬಲ್ಲಿರಾ? ಈ ಕಾಗದದಲ್ಲಿ ನೀವು ಮಾಡುವ ರಂಧ್ರದ ಪರಿಧಿ ಅಥವ ಸುತ್ತಳತೆ ನಿಮ್ಮ ಸುತ್ತಳತೆಗಿಂತ ಹೆಚ್ಚಾಗಿದ್ದರೆ ಮಾತ್ರ ಹೀಗೆ ಮಾಡಲು ಸಾಧ್ಯ. ಅಸಾಧ್ಯ ಅನ್ನುವಿರಾ? ಇದು ಸಾಧ್ಯ. ಹೇಗೆ ಎಮಭುದನ್ನು ನಾನೇ ತಿಳಿಸಬೇಕಿದ್ದರೆ ಬ್ಲಾಗಿನಲ್ಲಿ ಹೇಳಿಕೆ ದಾಖಲಿಸಿ.

ಇಂಥ ಚಟುವಟಿಕೆಗಳು ಉಪಯುಕ್ತ ಎಂದು ನಿಮಗನ್ನಿಸಿದರೆ ತಿಳಿಸಿ. ನನ್ನ ಹತ್ತಿರ ಇಂಥವು  ಅನೇಕವಿವೆ. ಒಂದೊಂದಾಗಿ ತಿಳಿಸುತ್ತೇನೆ.

Advertisements
This entry was posted in ವಿಜ್ಞಾನ - ಮಾಡಿ ಕಲಿ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s