ಆವಶ್ಯಕತೆಗಳು

ಮೊದಲು ದೈಹಿಕ ಆರೋಗ್ಯವನ್ನೂ ತದನಂತರ ಮಾನಸಿಕ ಆರೋಗ್ಯವನ್ನೂ ಕಾಯ್ದುಕೊಳ್ಳಲು ವ್ಯಕ್ತಿ ನೆರವೇರಿಸಲೇ  (ಪೂರೈಸಲೇ) ಬೇಕಾದವುಗಳೇ ಆ ವ್ಯಕ್ತಿಯ ’ಆವಶ್ಯಕತೆಗಳು’. ಸಮಾಜಜೀವಿ ಮಾನವನ (ಗುಹಾವಾಸಿಗಳಾಗಿ ಬಾಹ್ಯಜಗತ್ತಿನ ಸಂಪರ್ಕವನ್ನು ಕಡಿದುಕೊಂಡಿರುವ ಸನ್ಯಾಸಿಗಳನ್ನು ಹೊರತುಪಡಿಸಿ) ಎಲ್ಲ ಆವಶ್ಯಕತೆಗಳನ್ನು ಪಟ್ಟಿಮಾಡುವುದಾಗಲೀ ವರ್ಗೀಕರಿಸುವುದಾಗಲೀ ಬಲು ಕಷ್ಟ. ಹಸಿವು, ನಿದ್ದೆ ಇವೇ ಮೊದಲಾದ ಶಾರೀರಿಕ ಆವಶ್ಯಕತೆಗಳು; ಚಿಂತೆಯಿಂದ ಮುಕ್ತಿ, ದೈಹಿಕ ನೋವು ಆಗದಂತೆ ರಕ್ಷಣೆ ಇವೇ ಮೊದಲಾದ ಸುರಕ್ಷಣೆಯ ಆವಶ್ಯಕತೆಗಳು; ಕೆಲವರನ್ನಾದರೂ ಪ್ರೀತಿಸಬೇಕಾದ ಮತ್ತು ಕೆಲವರಿಂದಲಾದರೂ ಪ್ರೀತಿಸಲ್ಪಡಬೇಕಾದ ಆವಶ್ಯಕತೆಗಳು; ಸ್ವಸಾಮರ್ಥ್ಯದಲ್ಲಿ ವಿಶ್ವಾಸ, ಪ್ರಭುತ್ವದ ಅನುಭವ ಇವೇ ಮೊದಲಾದ ಸಾಮಾಜಿಕ ಗಣ್ಯತೆಯ ಗಳಿಕೆ ಸಂಬಂಧಿತ ಆವಶ್ಯಕತೆಗಳು; ಕುತೂಹಲ ತಣಿಸಿಕೊಳ್ಳುವಿಕೆ, ಸೃಜನಶೀಲ ಅಭಿವ್ಯಕ್ತಿ ಇವೇ ಮೊದಲಾದ ಸ್ವವಿಕಾಸ ಸಂಬಂಧಿತ ಆವಶ್ಯಕತೆಗಳು – ಹೀಗೆ ಆವಶ್ಯಕತೆಗಳ ಬಲು ದೊಡ್ಡ ಪಟ್ಟಿಯೇ ಇದೆ. ಎಲ್ಲ ಆವಶ್ಯಕತೆಗಳನ್ನು ಏಕಕಾಲದಲ್ಲಿ ಪೂರೈಸಲೂ ಸಾಧ್ಯವಿಲ್ಲ. ಯಾವುದೇ ಆವಶ್ಯಕತೆಯನ್ನು ಒಮ್ಮೆ ಪೂರೈಸಿದರೆ ಸಾಕು, ಇನ್ನೆಂದೂ ಇದರ ಕುರಿತು ಚಿಂತೆ ಮಾಡಬೇಕಿಲ್ಲ ಎಂದು ನಿರಾಳವಾಗಿರಲೂ ಸಾಧ್ಯವಿಲ್ಲ. ಸನ್ಯಾಸತ್ವ ಸ್ವೀಕರಿಸಿದರೂ ಸದಾ ಪೂರೈಸುತ್ತಲೇ ಇರಬೇಕಾದ ಕೆಲವು ಆವಶ್ಯಕತೆಗಳು ಇದ್ದೇ ಇರುತ್ತವೆ (ಉದಾ: ಉಸಿರಾಡಬೇಕಾದ ಆವಶ್ಯಕತೆ). ಎಲ್ಲ ‘ಆವಶ್ಯಕತೆಗಳನ್ನು’  ಅವು ಮುಂದೆಂದೂ ನಮ್ಮನ್ನು ಕಾಡದಂತೆ ಪೂರೈಸಿಕೊಳ್ಳುವುದು ಸಾಧ್ಯವಾದರೆ? ಬಾಹ್ಯ ಜಗತ್ತಿನಲ್ಲಿ ನಾವು ಮಾಡಬೇಕಾದದ್ದು ಏನೂ ಇರುವುದಿಲ್ಲ, ಉಸಿರಾಡಲೂ ಬೇಕಿಲ್ಲ. ಅರ್ಥಾತ್ ನಾವು ಸಾಯುತ್ತೇವೆ!

ಪ್ರತೀ ವ್ಯಕ್ತಿಯನ್ನು ಒಂದಲ್ಲ ಒಂದು ’ಆವಶ್ಯಕತೆ’ ಜೀವನದಾದ್ಯಂತ ಕಾಡುತ್ತಲೇ ಇರುತ್ತವೆ. ವಾಸ್ತವವಾಗಿ ‘ಆವಶ್ಯಕತೆ’ಗಳು ಕಾಡದೇ ಇರುವ ಕ್ಷಣಗಳೇ ಇಲ್ಲ (ಉದಾ ಉಸಿರಾಡಬೇಕಾದ ಆವಶ್ಯಕತೆ). ಈ ಆವಶ್ಯಕತೆಗಳನ್ನು ಪೂರೈಸಲೋಸುಗವೇ ಬಾಹ್ಯ ಜಗತ್ತಿನಲ್ಲಿ ನಾವು ಸದಾ ಕ್ರಿಯಾಶೀಲರಾಗಿರುತ್ತೇವೆ. ಅರ್ಥಾತ್, ಆವಶ್ಯಕತೆಗಳೇ ನಾವು ಕಾರ್ಯೋನ್ಮುಖರಾಗುವಂತೆ ಮಾಡುವ ಆಂತರಿಕ ಚಾಲಶಕ್ತಿಯ ಮೂಲ. ಆವಶ್ಯಕತೆಗಳು ವ್ಯಕ್ತಿಗತವಾದವು ಆಗಿದ್ದರೂ ಅವುಗಳ ಪೂರೈಕೆಗಾಗಿ ನಾವು ನಮ್ಮ ಪರಿಸರವನ್ನು (ಭೌತಿಕ ಮತ್ತು ಸಾಮಾಜಿಕ) ಅವಲಂಬಿಸಲೇ ಬೇಕು, ಪರಿಸರದೊಂದಿಗೆ ಅನ್ಯೋನ್ಯಕ್ರಿಯೆ ನಡೆಸಲೇ ಬೇಕು. ಎದುರಾಗುವ ಅಡೆತಡೆಗಳನ್ನು ನಿವಾರಿಸಿಕೊಂಡು ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದನ್ನು ಕಲಿಯಲೇ ಬೇಕು. ಇದೇ ನಮ್ಮ ಸಮಸ್ಯೆಗಳ ಮೂಲ. ಈ ಕುರಿತು ಇನ್ನೊಂದು ‘ಬ್ಲಾಗ್’ನಲ್ಲಿ ಚರ್ಚಿಸುತ್ತೇನೆ.

’ಆವಶ್ಯಕತೆ’ಗಳಿಗೂ ’ಬೇಕು (ಬಯಕೆ, ಆಸೆ)’ಗಳಿಗೂ ವ್ಯತ್ಯಾಸವಿದೆ. ಎಲ್ಲ ’ಆವಶ್ಯಕತೆ”ಗಳೂ ’ಬೇಕು’ಗಳೂ ಆಗಿರುತ್ತವಾದರೂ ಎಲ್ಲ ’ಬೇಕು’ಗಳು ’ಆವಶ್ಯಕತೆ’ಗಳು ಆಗಿರುವುದಿಲ್ಲ. ಉದಾಹರಣೆಗೆ ನಿದ್ದೆ ‘ಆವಶ್ಯಕತೆ’. ನಿದ್ದೆ ಮಾಡಲು ಹಾಸಿಗೆ ‘ಬೇಕು’. ಹಾಸಿಗೆ ಹಾಸಲು ಒಂದು ಮಂಚ ‘ಬೇಕು’ ಅನ್ನುವುದು ‘ಆಸೆ’. ಮಂಚ ತೇಗದ ಮರದ್ದು ಆಗಿರ‘ಬೇಕು’ ಅನ್ನುವುದು (ಅತಿ) ಆಸೆ. ಹಸಿವು ಇಂಗಿಸ ಬೇಕಾದದ್ದು ‘ಆವಶ್ಯಕತೆ’. ಇದನ್ನು ಪೂರೈಸಲು ಅನ್ನ ‘ಬೇಕು’. ಅನ್ನ ಬಾಸುಮತಿ ಅಕ್ಕಿಯದ್ದು ಆಗಿರ’ಬೇಕು’ ಅನ್ನುವುದು ‘ಆಸೆ’. ಈ ‘ಬೇಕು’ಗಳು ಇಲ್ಲದೇ ಇದ್ದರೂ ಆವಶ್ಯಕತೆ ಪೂರೈಸಿಕೊಳ್ಳ ಬಹುದು ಎಂಬುದನ್ನು ಗಮನಿಸಿ.

ಆವಶ್ಯಕತೆಗಳನ್ನು ಪೂರೈಸಿಕೊಳ್ಳ ಬೇಕಾದದ್ದು ಅತ್ಯಾವಶ್ಯಕವಾದರೂ ಅವುಗಳನ್ನು ಪೂರೈಸಿಕೊಳ್ಳಲು ಕಾರ್ಯೋನ್ಮುಖರಾದಾಗ ಸಮಸ್ಯೆಗಳನ್ನು ಎದುರಿಸ ಬೇಕಾದದ್ದು ಅನಿವಾರ್ಯವಾದರೂ (ಕಾರಣ ನೀವೇ ಊಹಿಸಿ) ಅವುಗಳನ್ನು ಪೂರೈಸಬಲ್ಲ ‘ಬೇಕು,ಗಳ’ ‘ಆಸೆ’ಗಳ ಮೇಲೆ ನಿಯಂತ್ರಣ ಸಾಧಿಸದಿದ್ದರೆ ಏನಾದೀತು? ಸಮಸ್ಯೆಗಳ ಸಂಖ್ಯೆ ಮತ್ತು ತೀವ್ರತೆ ಹೆಚ್ಚಲೇ ಬೇಕಲ್ಲವೆ? ‘ಬೇಕು’ಗಳನ್ನು ಗಳಿಸಿದರೂ ಮುಂದೆ ಅವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲೋಸುಗ ಇನ್ನಷ್ಟು ‘ಬೇಕು’ಗಳು ಸೃಷ್ಟಿಯಾಗಿ ಅವುಗಳನ್ನು ಪಡೆಯಲೋಸುಗ ಹೆಣಗಾಡುತ್ತಲೇ ಇರಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದಿಲ್ಲವೇ?

ಆಸೆಯೇ ದುಃಖದ ಮೂಲ ಎಂಬ ಋಷಿವಾಣಿಯ ಅಂತಸ್ಥ ಅರ್ಥ ಇದಾಗಿರಬಹುದೇ?

Advertisements
This entry was posted in ನನ್ನ ಜೀವನ ದರ್ಶನ, ಶಿಕ್ಷಣ. Bookmark the permalink.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s