ಶಿಕ್ಷಕರ ದಿನ

ಭವಿಷ್ಯದ ಪ್ರಜೆಗಳ ರೂವಾರಿಗಳು ಎಂದು ಹೊಗಳಿಸಿಕೊಳ್ಳುವ ಶಿಕ್ಷಕವೃಂದಕ್ಕೆ ಸಮುದಾಯ ಮತ್ತು ಶಿಷ್ಯವರ್ಗ ತನ್ನ  ಕೃತಜ್ಞತಾಪೂರ್ವಕ ನಮನಗಳನ್ನು  ಸಲ್ಲಿಸಬೇಕಾದ ದಿನ. ಬಹುತೇಕ ಸನ್ನಿವೇಶಗಳಲ್ಲಿ ಶಿಕ್ಷಣ ಇಲಾಖೆಯ  ಅಧಿಕಾರಿಗಳು ಶಿಕ್ಷಕ ಸಂಘಗಳ ನೆರವಿನಿಂದ ಶಿಕ್ಷಕರನ್ನು ಕಡ್ಡಾಯವಾಗಿ ಒಂದೆಡೆ ಕಲೆಹಾಕಿ ‘ನಾಕ್ಷತ್ರಿಕ ಮೌಲ್ಯ’  ಇರುವ ಒಬ್ಬ ‘ಮುಖ್ಯ ಭಾಷಣಕಾರ’ (3-4 ಬಾರಿ ನಾಕ್ಷತ್ರಿಕ ಮೌಲ್ಯ  ಇಲ್ಲದ ನನಗೂ ಈ ಪಟ್ಟ ಸಿಕ್ಕಿದ್ದುಂಟು) ಮತ್ತು 1-2 ‘ಜನಪ್ರತಿನಿಧಿ’ಗಳಿಂದ ಶಿಕ್ಷಕ ವೃತ್ತಿಯ ಘನತೆ, ಗೌರವ , ಗುರುತರ ಜವಾಬ್ದಾರಿ, ಉದಾತ್ತತೆಗಳ ಕುರಿತು ಭಾಷಣ ‘ಕೊರೆಯಿಸಿ’ ಒಂದು ಭರ್ಜರಿ ಭೋಜನ ಹಾಕಿಸಬೇಕಾದ ದಿನ. ಇಂಥ ಸಂದರ್ಭಗಳಲ್ಲಿ ವೇದಿಕೆ ತುಂಬಿ ತುಳುಕುವಷ್ಟು ‘ಜನಪ್ರತಿನಿಧಿ’ಗಳು ಇರಬೇಕಾದದ್ದು ಅನಿವಾರ್ಯ(ಮುಖ್ಯ ಭಾಷಣಕಾರ ತಾನು ಎಲ್ಲಿ ಕುಳಿತುಕೊಳ್ಳಬೇಕು ಎಂದು ತಿಳಿಯದೆ ಬೆಪ್ಪನಂತೆ ಅತ್ತಿತ್ತ ನೋಡುವ ಸಾಧ್ಯತೆ ಹೆಚ್ಚು). ಉದ್ಘಾಟನೆಯ ಹೆಸರಿನಲ್ಲಿ ಜರಗುವ ‘ಜನಪ್ರಿಯ’ ಜನಪ್ರತಿನಿಧಿಯಿಂದ (ಬಹುತೇಕ ಸಂದರ್ಭಗಳಲ್ಲಿ ಈ ಪಟ್ಟ ಸ್ಥಳೀಯ ಶಾಸಕರದ್ದು ಆಗಿರುತ್ತದೆ. ಅವರ ಅನುಮತಿ ಇಲ್ಲದೇ ಈ ಪಟ್ಟ ಬೇರೆಯವರಿಗೆ ಕೊಟ್ಟರೆ ಸಂಬಂಧಿಸಿದ ಅಧಿಕಾರಿಯ ‘ಮುಖಕ್ಕೆ ಮಂಗಳಾರತಿ ಆಗುವುದು ಖಚಿತ)  ‘ದೀಪ ಬೆಳಗುವ ಕಾರ್ಯಕ್ರಮ’ದ ಛಾಯಾಚಿತ್ರಗಳಲ್ಲಿ ತಮ್ಮ ಮುಖಾರವಿಂದ ಇರಲೇ ಬೇಕೆಂದು  ಯೋಗ್ಯ ಸ್ಥಳ ಗಿಟ್ಟಿಸಿಕೊಳ್ಳಲು ವೇದಿಕೆಯ ಮೇಲೆ ತುಂಬಿರುವ ಚಿಲ್ಲರೆ ಜನಪ್ರತಿನಿಧಿಗಳು ಪೈಪೋಟಿ ಮಾಡಬೇಕಾದದ್ದೂ ಅನಿವಾರ್ಯ (ಮುಖ್ಯ ಭಾಷಣಕಾರ ಹೇಗಾದರೂ ಮಾಡಿ ದೀಪದ ಬಳಿ ಸೇರಿಕೊಂಡರೆ ಅವನ/ಳ ಅಸ್ತಿತ್ವ ಛಾಯಾ.ಚಿತ್ರದಲ್ಲಿ ದಾಖಲಾಗುವ ಸಾಧ್ಯತೆ ಇದೆ). ವೇದಿಕೆಯ ಮೇಲೆ ಕುರ್ಚಿ ಗಿಟ್ಟಿಸಿಕೊಂಡವರೆಲ್ಲರಿಗೂ ಗಣ್ಯತ್ವ ಅಯಾಚಿತವಾಗಿ ಲಭಿಸುವುದರಿಂದ ಸ್ವಾಗತಕಾರ ಬಲು ಜಾಗರೂಕತೆಯಿಂದ ಅಷ್ಟೂ ಜನ ಗಣ್ಯರನ್ನು ಅವರ ಗಣ್ಯತೆಯ ಇಳಿಕೆಯ ಕ್ರಮದಲ್ಲಿ ಅನುಕ್ರಮವಾಗಿ ಹೆಸರಿಸಿ ‘ಒಂದೆರಡು ಮಾತುಗಳಲ್ಲಿ” ಅವರ ಗಣ್ಯತೆಯನ್ನೂ ವಿಪರೀತ ಕಾರ್ಯಬಾಹುಳ್ಯವಿದ್ದರೂ  ‘ಶಿಕ್ಷಕರ ಮೇಲೆ ಅಪಾರ ಗೌರವ ಿರುವುದರಿಂದ’ ಬಿಡುವು ಮಾಡಿಕೊಂಡು ಆಗಮಿಸಿದ್ದನ್ನೂ ಸಭಾಸದರಿಗೆ ತಿಳಿಸಿ ( ಅವರ ಗಣ್ಯತೆ ಸ್ವಾಗತಕಾರನ ಹೊರತಾಗಿ ಆ ವ್ಯಕ್ತಿಯೂ ಸೇರಿದಂತೆ ಬೇರೆ ಯಾರಿಗೂ ತಿಳಿದಿರುವುದಿಲ್ಲವಾದ್ದರಿಂದ) ಮಾಲಾರ್ಪಣೆ ಮಾಡಿಸಿ ಸ್ವಾಗತಿಸಬೇಕಾದದ್ದೂ ಅನಿವಾರ್ಯ (ಇಲ್ಲದೇ ಇದ್ದರೆ ಜನಪ್ರತಿನಿಧಿಯನ್ನು ಅವಮಾನಿಸಿದ ಎಂಬ ಆರೋಪ ಎದುರಿಸಬೇಕಾದೀತು). ಮಾಲೆಗಳ ಕೊರತೆ ಉಂಟಾದಲ್ಲಿ ಸಂಘಟಕರು ತಲೆ ಕೆಡಿಸಿಕೊಳ್ಳುವುದಿಲ್ಲ. ಮೊದಲು ಹಾರ ಹಾಕಿಸಿಕೊಂಡ ವ್ಯಕ್ತಿ ಅದನ್ನು ತೆಗೆದು ಪಕ್ಕದಲ್ಲಿ ಇಟ್ಟಿರುವುದು ಖಚಿತ, ಅದನ್ನೇ ಎಗರಿಸಿ ಮತ್ತೊಬ್ಬರಿಗೆ ಹಾಕುತ್ತಾರೆ. ಕೊನೆಯಲ್ಲಿ ವಂದನಾರ್ಪಣೆ ಮಾಡುವ ವ್ಯಕ್ತಿಯೂ ಹೆಚ್ಚುಕಮ್ಮಿ ಸ್ವಾಗತಕಾರನ ಮಾತುಗಳನ್ನು ಪುನರಾವರ್ತಿಸಿ ವಂದನೆ ಸಲ್ಲಿಸುವುದರೊಂದಿಗೆ ‘ಇಷ್ಟು ದೊಡ್ಡ ಸಂಖ್ಯೆಯಲ್ಲಿ’ ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಿಕ್ಷಕರಿಗೆ, ಕಾರ್ಯಕ್ರಮದ ಸೂತ್ರಧಾರರಾದ ‘ನಮ್ಮೆಲ್ಲರ ಅಚ್ಚುಮೆಚ್ಚಿನ’ ಅಧಿಕಾರಿಗೆ, ಕಾರ್ಯಕ್ರಮದ ಯಶಸ್ಸಿಗೆ’ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ’ ಕಾರಣರಾದ ಎಲ್ಲರಿಗೆ ವಂದನೆ ಸಲ್ಲಿಸಲೇಬೇಕು. (ಎರಡೂ ಸಂದರ್ಭಗಳಲ್ಲಿ ಯಾರ ಹೆಸರನ್ನಾದರೂ ಮರೆತರೆ ಕಿವಿಯಲ್ಲಿ ಪಿಸುಗುಟ್ಟಿ ನೆನಪಿಸಲೂ ಒಬ್ಬ ವ್ಯಕ್ತಿ ನಿಯೋಜಿತನಾಗಿರುತ್ತಾನೆ). ಕೆಲವೊಮ್ಮೆ, ವೇದಿಕೆಯ ಮೇಲೆ ‘ಉಪಸ್ಥಿತರಿರುವ’ರೆಲ್ಲರಿಗೂ ‘ಶಾಲು, ನೆನಪಿನ ಕಾಣಿಕೆಯ’ ಸನ್ಮಾನವೂ ಇರುತ್ತದೆ (ಈ ಶಾಲು, ನೆನಪಿನ ಕಾಣಿಕೆಗಳ ಬದಲು ಹಣ್ಣು ಅಥವ ಹಣ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು  ಎಂದು ನನಗನ್ನಿಸಿದ್ದೂ ಸುಳ್ಳಲ್ಲ). ಏತನ್ಮಧ್ಯೆ, ಭಾಷಣಗಳು. ‘ಮುಖ್ಯ ಭಾಷಣಕಾರ’ನ ಭಾಷಣದ ಉದ್ದ ‘ಜನಪ್ರತಿನಿಧಿ’ಗಳ ಭಾಷಣದ ುದ್ದವನ್ನು ಅವಲಂಬಿಸಿರುತ್ತದೆ. ಅವರದ್ದು ‘ಸುದೀರ್ಘವಾಗಿದ್ದರೆ’  ಯಾರೋ ಒಬ್ಬ ಅಧಿಕಾರಿ ‘ ಕ್ಷಮಿಸಿ ಸಾರ್, ರಾಜಕಾರಣಿಗಳ ಬಗ್ಗೆ ತಮಗೆ ಗೊತ್ತಲ್ಲ. ನಾವೇನೂ ಮಾಡುವಂತಿಲ್ಲ. ತಮ್ಮದು ಸಂಕ್ಷಿಪ್ತವಾಗಿರಲಿ’ ಎಂದು ಮುಖ್ಯಭಾಷಣಕಾರನ ಕಿವಿಯಲ್ಲಿ ಪಿಸುಗುಟ್ಟುವುದು ಖಾತರಿ. ಭಾಷಣ ುದ್ದವಾಗುವ ಲಕ್ಷಣ ಇದ್ದರೆ ‘ಸಮಯದ ಅಭಾವ – ಬೇಗ ಮುಗಿಸಿ’ ಎಂಬ ಸುಛನೆ ಇರುವ ಚೀಟಿ ಬರುವುದೂ ಖಾತರಿ. ಈ ‘ಸಮಯದ ಅಭಾವ’ಕ್ಕೆ ಪ್ರತೀ ಚಟುವಟಿಕೆಯ  ಮುನ್ನ ಮತ್ತು ತರುವಾಯ ಸಾಂದರ್ಭಿಕವಾಗಿ ‘ಒಂದೆರಡು’ ಮಾತುಗಳನ್ನು ಕಡ್ಡಾಯವಾಗಿ ಹೇಳಿ ತನ್ನ ಪಾಂಡಿತ್ಯ ಪ್ರದರ್ಶಿಸಲೇ ಬೇಕು ಎಂದು ಪಣ ತೊಟ್ಟ ‘ಕಾರ್ಯಕ್ರಮ ನಿರೂಪಕ’ನ ಗಣನೀಯ ಪರಿಮಾಣದ ಕೊಡುಗೆ ಇರುತ್ತದೆ.

‘ಜಯ್ ಹೋ’ ಶಿಕ್ಷಕರ ದಿನ

Advertisements
This entry was posted in ಅನುಭವಾಮೃತ. Bookmark the permalink.

One Response to ಶಿಕ್ಷಕರ ದಿನ

  1. my pen from shrishaila ಹೇಳುತ್ತಾರೆ:

    ಭವಿಷ್ಯದ ಪ್ರಜೆಗಳ ರೂವಾರಿಗಳಾದ ಶಿಕ್ಷಕರೆ ನಿಮಗೆ ‘ಜಯ್ ಹೋ’ !

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s